ಪ್ಯೂನಿಕ್ ಯುದ್ಧಗಳು	- 	
ಮೆಡಿಟರೇನಿಯನ್ನಿನ ಮೇಲೆ ಹತೋಟಿಗಾಗಿ ರೋಮ್ ಮತ್ತು ಕಾರ್ತೇಜ್‍ಗಳ ನಡುವೆÀ ನಡೆದ ಮೂರು ಯುದ್ಧಗಳ ಸರಣಿ. ಕಾರ್ತೇಜ್ ಪಟ್ಟಣದವನು, ಕಾರ್ತೇಜಿಗೆ ಸಂಬಂಧಿಸಿದ್ದು ಎಂಬುದನ್ನು ಪ್ಯೂನಿಕ್ ಎಂದು ಕರೆಯುವುದರಿಂದ ಈ ಯುದ್ಧಗಳಿಗೆ ಈ ಹೆಸರು ಬಂದಿದೆ. ಪ್ಯೂನಿಕ್ ಯುದ್ಧಗಳು ಆರಂಭವಾದಾಗ ಕಾರ್ತೇಜ್ ಒಂದು ಮಹಾಶಕ್ತಿಯಾಗಿತ್ತು. ಉತ್ತರ ಆಫ್ರಿಕ ಮತ್ತು ಮೆಡಿಟರೇನಿಯನ್ ದ್ದೀಪಗಳ ಮೇಲೂ ಆ ಪ್ರದೇಶದ ವಾಣಿಜ್ಯದ ಮೇಲೂ ಪ್ರಭುತ್ವ ಪಡೆದಿತ್ತು. ಯುದ್ಧ ಮುಗಿದಾಗ ಕಾರ್ತೇಜ್ ನಾಶವಾಗಿತ್ತು. ಚೀನದ ಪಶ್ಚಿಮಕ್ಕೆ ರೋಮ್ ಅತ್ಯಂತ ಪ್ರಬಲಶಕ್ತಿಯಾಗಿತ್ತು. ಒಂದನೆಯ ಪ್ಯೂನಿಕ್ ಯುದ್ಧ ನೆಡೆದದ್ದು ಕ್ರಿ.ಪೂ. 264-241ರಲ್ಲಿ. ಮೆಸಾನಕ್ಕೂ ಸಿರಕ್ಯೂಸಿಗೂ ನಡುವಣ ವ್ಯಾಜ್ಯದಲ್ಲಿ ತನಗೆ ನೆರವು ನೀಡಬೇಕೆಂದು ರೋಮ್, ಕಾರ್ತೇಜ್ ಎರಡಕ್ಕೂ ಮೆಸಾನ ಮೊರೆಯಿಟ್ಟಿತು. ಕಾರ್ತೇಜಿನಿಯನ್ನರು ಮೊದಲು ಬಂದು ಶಾಂತಿ ಏರ್ಪಡಿಸಿದರು. ಆದರೆ ಅನಂತರ ಬಂದ ರೋಮನರು ಅವರನ್ನು ಹೊರತಳ್ಳಿ ಪೂರ್ವ ಸಿಸಿಲಿಯನ್ನು ಆಕ್ರಮಿಸಿಕೊಂಡರು. ಮೈಲೇ ಎಂಬಲ್ಲಿ ಕ್ರಿ.ಪೂ. 260ರಲ್ಲೂ ಎಕ್ನಾಮಸ್ ಭೂಶಿರದ ಬಳಿಯಲ್ಲಿ 256ರಲ್ಲೂ ನಡೆದ ಕದನಗಳಲ್ಲಿ ರೋಮನರು ಜಯಗಳಿಸಿದರು. ಆದರೆ ಆಫ್ರಿಕದ ಮೇಲೆ ಅವರು ನಡೆಸಿದ ದಂಡಯಾತ್ರೆ ವಿಫಲಗೊಂಡಿತು. ಸಿಸಿಲಿಯಲ್ಲಿರುವ ಲಿಲಿಬೀಯಮ್ ರೇವುಪಟ್ಟಣವನ್ನು ರೋಮನರು ಹಿಡಿಯದಂತೆ ಕಾರ್ತೇಜಿನ ಸೇನಾನಿ ಹ್ಯಮಿಲ್ಕಾರ್ ಬಾರ್ಕ ತಡೆದ. ಆದರೆ ಸಿಸಿಲಿಯ ಪಶ್ಚಿಮ ತೀರದ ಬಳಿಯ ಈಗೇಡಿಯನ್ ದ್ವೀಪಗಳ ಬಳಿಯಲ್ಲಿ ಕ್ರಿ.ಪೂ. 241ರಲ್ಲಿ ನಡೆದ ಕದನದಲ್ಲಿ ರೋಮನರು ಗೆದ್ದರು. ಕಾರ್ತೇಜಿಯನರು ಶಾಂತಿಯನ್ನು ಬಯಸಿದರು. 

ಸಿಸಿಲಿಯನ್ನು ಪಡೆದುಕೊಂಡಿದ್ದ ರೋಮನರು ಕೌಲನ್ನು ಉಲ್ಲಂಘಿಸಿ ಸಾರ್ಡೀನಿಯ ಮತ್ತು ಕಾರ್ಸಿಕವನ್ನು ಗೆಲ್ಲಲು ದಂಡೆತ್ತಿದರು. ಕಾರ್ತೇಜಿನಿಯನರು ಸ್ಪೇನಿನಲ್ಲಿರುವ ಹ್ಯಾನಿಬಾಲನ ನೇತೃತ್ವದಲ್ಲಿ ಸಗಂಟಮ್ ಅನ್ನು ಹಿಡಿದುಕೊಂಡಾಗ ರೋಮ್ ಕಾರ್ತೇಜಿನ ಮೇಲೆ ಮತ್ತೆ ಯುದ್ಧ ಸಾರಿತು (ಕ್ರಿ.ಪೂ. 219). ಎರಡನೆಯ ಪ್ಯೂನಿಕ್ ಯುದ್ಧ ಕ್ರಿ.ಪೂ. 218 ರಿಂದ 201ರ ವರೆಗೆ ನಡೆಯಿತು. ಇದು ಹ್ಯಾನಿಬ್ಯಾಲಿಕ್ ಯುದ್ಧವೆಂದೂ ಹೆಸರಾಗಿದೆ. ಮೂರು ಪ್ಯೂನಿಕ್ ಯುದ್ಧಗಳಲ್ಲಿ ಇದು ಅತ್ಯಂತ ಪ್ರಸಿದ್ಧವಾದ್ದು. ಹ್ಯಾನಿಬಾಲ್ ಇಟಲಿಯ ಮೇಲೆ ಆಕ್ರಮಣ ನಡೆಸಿ ವಿಜಯ ಗಳಿಸಿದ. ಆದರೆ ಸೈನ್ಯಕ್ಕೆ ಬೇಕಾದ ಸರಬರಾಜು ಸಕಾಲದಲ್ಲಿ ಬಾರದ್ದರಿಂದಲೂ ಇಟಲಿಯ ಮೆಟಾರಸ್ ನದಿಯ ಬಳಿ ನಡೆದ ಕದನದಲ್ಲಿ (ಕ್ರಿ.ಪೂ. 207) ಅವನ ಸೋದರ ಹ್ಯಾಸ್ಡ್ರೂಬಲ್ ಸೋತದ್ದರಿಂದಲೂ ಅವನ ದಂಡಯಾತ್ರೆ ವಿಫಲಗೊಂಡಿತು. ಸಿಪಿಯೊ ಆಫ್ರಿಕಾನಸ್ ಮೇಜರನ ಆಕ್ರಮಣದಿಂದ ಕಾರ್ತೇಜನ್ನು ರಕ್ಷಿಸಲು ಅವನು ಆಫ್ರಿಕಕ್ಕೆ ಬಂದ. ಆದರೆ ಜಾಮ ಕದನದಲ್ಲಿ ಅವನಿಗೆ ಸೋಲಾಯಿತು. (ಕ್ರಿ.ಪೂ.202). ಕಾರ್ತೇಜ್ ತನ್ನ ಸ್ಪ್ಯಾನಿಷ್ ಪ್ರಾಂತ್ಯವನ್ನೂ ತನ್ನ ಯುದ್ಧ ನೌಕೆಗಳನ್ನೂ ಒಪ್ಪಿಸಬೇಕಾಯಿತು. 

ಈ ಆಘಾತದಿಂದ ಕಾರ್ತೇಜ್ ಚೇತರಿಸಿಕೊಳ್ಳಲಾರದೆ ಹೋಯಿತು. ಆದಾಗ್ಯೂ ರೋಮಿನ ನಾಯಕ ಹಿರಿಯ ಕ್ಯಾಟೋಗೆ (ಕ್ರಿ.ಪೂ. 234-149) ಕಾರ್ತೇಜನ್ನು ನೆಲಸಮಗೊಳಿಸುವವರೆಗೂ ಸಮಾಧಾನವಿರಲಿಲ್ಲ. ಮೂರನೆಯ ಪ್ಯೂನಿಕ್ ಯುದ್ಧಕ್ಕೆ (ಕ್ರಿ.ಪೂ. 149-146) ಒಂದು ನೆವ ಬೇಕಾಗಿತ್ತು. ರೋಮಿನ ಮಿತ್ರದೇಶವಾದ ಮ್ಯಾಸಿನಿಸದ ಆಕ್ರಮಣವನ್ನು ಕಾರ್ತೇಜ್ ಎದುರಿಸಿ ಕೌಲನ್ನು ಉಲ್ಲಂಘಿಸಿದೆಯೆಂದು ಹೇಳಿ ರೋಮ್ ಯುದ್ಧ ಸಾರಿತು. ಕಾರ್ತೇಜ್ ಮುತ್ತಿಗೆಗೆ ಒಳಗಾಯಿತು. ಆದರೂ ಕಾರ್ತೇಜ್ ಶರಣಾಗಲಿಲ್ಲ. ಕಿರಿಯ ಸಿಪಿಯೋ ಆಫ್ರಿಕಾನಸ್ ಮೈನರ್ ಅದನ್ನು ಗೆದ್ದು ನೆಲಸಮಮಾಡಿದ.
 		  									(ಬಿ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ